ಪಿತೃರಹಿತ ಪ್ರಜನನ -
ಗರ್ಭಾಂಕುರಗೊಳ್ಳದ ಅಂಡವೊಂದು ಪ್ರಬುದ್ಧಸ್ಥಿತಿಯ ವರೆಗೆ ಬೆಳೆದು ಹೊಸ ಜೀವವಾಗುವ ಒಂದು ಪ್ರಕ್ರಿಯೆ (ಪಾರ್ಥೆನೋ ಜೆನೆಸಿಸ್). ಎಲ್ಲ ಬಗೆಯ ಸಸ್ಯ ಮತ್ತು ಪ್ರಾಣಿಗಳಲ್ಲಿ ಲೈಂಗಿಕ ಸಂತಾನೋತ್ಪತ್ತಿ ಬಹುಸಾಮಾನ್ಯವಾದ ಕ್ರಿಯೆ. ಇದರಲ್ಲಿ ಸಾಧಾರಣವಾಗಿ ಒಂದು ಅಂಡಾಣು ರೇತ್ರಾಣುವಿನಿಂದ ಗರ್ಭಾಂಕುರಗೊಂಡ ಅನಂತರ ಹೊಸ ಜೀವಿಯಾಗಿ ವೃದ್ಧಿಸಲಾರಂಭಿಸುತ್ತದೆ. ಪಿತೃರಹಿತ ಪ್ರಜನನ ಅಪರೂಪವಾಗಿ ಕೆಲವು ಬಗೆಯ ಆಲ್ಗೆಗಳಲ್ಲಿ ಕಂಡುಬರುತ್ತದೆ. ಇಲ್ಲಿ ಗಂಡು ಗ್ಯಾಮೀಟು ಹೆಣ್ಣು ಗ್ಯಾಮೀಟಿಗಿಂತ ಸ್ವಲ್ಪ ಭಿನ್ನವಾಗಿರುವಂತೆ ಕಂಡುಬರುತ್ತದೆ. ಪಿತೃರಹಿತ ಪ್ರಜನನದ ವಿಧಾನದಲ್ಲಿ ಪಡೆದ ಸಂತಾನಕ್ಕೆ ಪಾರ್ಥೆನೋಗೋನ್ ಎಂದು ಹೆಸರು. ಈ ಬಗೆಯ ಪ್ರಜನನ ಕೆಲವು ಬಗೆಯ ಕೀಟ, ವಲ್ಕವಂತ ಹುಳು ಪ್ರಧಾನವಾಗಿ ಕಾಣಬರುತ್ತದೆ. ಹೆಚ್ಚು ಪರಿಚಿತ ಉದಾಹರಣೆ : ಎಫಿಡ್ ಅನೇಕ ಪೀಳಿಗೆಗಳಲ್ಲಿ ಹೆಣ್ಣುಗಳು ಪಿತೃರಹಿತ ಪ್ರಜನದಿಂದ ಹುಟ್ಟುತ್ತವೆ.  ಗಂಡು ಎಫಿಡ್‍ಗಳು ಪಿತೃರಹಿತ ಪ್ರಜನನದ ರೀತಿಯಲ್ಲಿ ಉತ್ಪತ್ತಿಯಾಗಿ ದ್ವಿಲಿಂಗ ರೀತಿಯ ಪ್ರಜನನ ಮತ್ತೆ ಕಾಣಿಸಿಕೊಳ್ಳುತ್ತದೆ. ಪಿತೃರಹಿತ ಹಾಗೂ ದ್ವಿಲಿಂಗ ರೀತಿಯ ಸಂತಾನೋತ್ಪಾದನೆ ಚಕ್ರೀಯವಾಗಿ ನಡೆಯುತ್ತದೆ. ಪಿತೃರಹಿತ ಪ್ರಜನನ ಸಾಧಾರಣ, ಬಗೆಯ ಲೈಂಗಿಕ ರೀತಿಯ ಪ್ರಜನನದ ರೂಪಾಂತರ ಮಾತ್ರ. ಇದು ಅಲೈಂಗಿಕ ರೀತಿಯ ಪ್ರಜನನ ಅಲ್ಲ. 

	ಪಿತೃರಹಿತ ಪ್ರಜನನ ನಿಮ್ನ ರೀತಿಯದ್ದೇನಲ್ಲ. ಇದು ಆಕಸ್ಮಿಕವಾದ ಬದಲಾವಣೆಯಿಂದ ಅಂದರೆ ಉತ್ಪರಿವರ್ತನೆಯಿಂದ (ಮ್ಯೂಟೇಷನ್) ಲೈಂಗಿಕ ಜೀವಪ್ರಭೇಧದಲ್ಲಿ ಕಾಣಿಸಿಕೊಂಡಿರಬೇಕು. ಜೀವಿಗಳಲ್ಲಿ ಪ್ರಾಯೋಗಿಕವಾಗಿ ಕೃತಕ ಪಿತೃರಹಿತ ಪ್ರಜನನ ಪ್ರಚೋದಿಸಬಹುದು. ಪಿತೃರಹಿತ ಪ್ರಜನನಕ್ಕೆ ಸ್ವಾಭಾವಿಕ ಕಾರಣಗಳು ಯಾವುದೆಂದು ತಿಳಿದುಬಂದಿಲ್ಲ. ಬಹುಶಃ ಇವು ಅನೇಕ ಬಗೆಯವಾಗಿರಬಹುದು ಹಾಗೂ ವಿಭಿನ್ನ ರೀತಿಯವಾಗಿರಬಹುದು. ಇದನ್ನು ಬೆಳಕು, ಉಷ್ಣತೆ, ಪುಷ್ಟಿಕರ ಆಹಾರ, ಸಸ್ಯ ತಳೀಕರಣ ಹಾಗೂ ಹಲವಾರು ಬಗೆಯ ಕೃತಕ ಸಾಧನಗಳಿಂದ ಪರೀಕ್ಷಿಸಬಹುದಾಗಿದೆ. ಅಂಡಗಳಲ್ಲಿ ಕ್ಯಾಲ್ಸಿಯಮ್ಮಿನ ಪಾತ್ರ ಹೆಚ್ಚು ಗಮನಾರ್ಹ. 

	ಸ್ವಾಭಾವಿಕ ಪಿತೃರಹಿತ ಪ್ರಜನನ : ಈ ಕ್ರಿಯೆಯನ್ನು ತೋರುವ ಪ್ರಾಣಿಗಳಲ್ಲಿ ವಿಶೇಷವಾಗಿ ಎಫಿಡ್, ಪರಾವಲಂಬಿ ಕಣಜಗಳು ಹಾಗೂ ಸಸ್ಯಹೇನುಗಳು ಮುಂತಾದವುಗಳ ಗಂಡುಗಳೇ ಇರುವುದಿಲ್ಲ. ಕಶೇರುಕ ಮತ್ತು ಕಂಟಕಚರ್ಮಿಗಳ ಹೊರತು ಪಡಿಸಿ  ಉಳಿದ ಪ್ರಮುಖ ಗುಂಪಿನ ಜೀವಿಗಳಲ್ಲಿ ಈ ಕ್ರಿಯೆಯನ್ನು ಕಾಣಬಹುದು. ಕೆಲವು ತೆರನ ಎಫಿಡ್ ಹಾಗೂ ನೀರಿನ ಚಿಗಟ ಮತ್ತು ರೋಟಿಫೆರ್‍ಗಳಲ್ಲಿ ಪಿತೃರಹಿತ ಪ್ರಜನನ ಲೈಂಗಿಕ ಪ್ರಜನನಕ್ಕೆ ಪರ್ಯಾಯವಾಗಿದೆ. ಜೇನುನೊಣಗಳಲ್ಲಿ ಮತ್ತು ಕೆಲವು ಬಗೆಯ ಸಸ್ಯಹೇನುಗಳಲ್ಲಿ ಯಾವುದೇ ಅಂಡಕ್ಕೆ ಪಿತೃರಹಿತ ಪ್ರಜನನದ ರೀತಿಯಲ್ಲಿ ವೃದ್ಧಿಹೊಂದುವ ಸಾಮಥ್ರ್ಯ ಇದ್ದರೂ ಗರ್ಭಾಂಕುರಗೊಂಡ ಅಂಡಗಳು ಹೆಣ್ಣು ಜೀವಿಗಳಾಗಿಯೂ ಗರ್ಭಾಂಕುರವಾಗದ ಅಂಡಗಳು ಗಂಡು ಜೀವಿಗಳಾಗಿಯೂ ವರ್ಧಿಸುವುವು.

	ಅನೇಕ ರೋಟಿಫೆರ, ಎಫಿಡ್ ಹಾಗೂ ನೀರಿನ ಚಿಗಟಗಳಲ್ಲಿ ಗರ್ಭಾಂಕುರಗೊಂಡ ಅಂಡಗಳು ಹೆಣ್ಣು ಜೀವಿಗಳಾಗಿ ವೃದ್ಧಿಹೊಂದುವುವಲ್ಲದೆ. ಬೇರೊಂದು ಪರಿಸ್ಥಿತಿಯಲ್ಲಿ ಪಿತೃರಹಿತ ಪ್ರಜನನದ ರೀತಿಯಲ್ಲೂ ವೃದ್ಧಿ ಹೊಂದುತ್ತವೆ. ರೋಟಿಫೆರ್‍ಗಳಲ್ಲಿ ಯಾವುದೇ ಅನುಕ್ರಮಣಿಕ ಪೀಳಿಗೆಯಲ್ಲಿ ಪಿತೃರಹಿತ ಜನಿತ ಹೆಣ್ಣುಗಳು ಹಾಗೂ ಲೈಂಗಿಕ ಜನಿತ ಹೆಣ್ಣುಗಳು ಕಾಣಬರಬಹುದು. ಪಿತೃರಹಿತ ಜನಿತ ಹೆಣ್ಣುಗಳು ದೊಡ್ಡದಾದ ಅಂಡಗಳನ್ನು ಉತ್ಪಾದಿಸುವುದಿಲ್ಲ. ಅವು ಗರ್ಭಾಂಕುರಗೊಳ್ಳದಿದ್ದು, ಮುಂದೆ ಪಿತೃರಹಿತ ಜನಿತ ಅಥವಾ ಲೈಂಗಿಕ ಜನಿತ ಹೆಣ್ಣು ಜೀವಿಗಳನ್ನು ಈಯಬಹುದು. ಲೈಂಗಿಕ ಜನಿತ ಹೆಣ್ಣುಗಳು ಸಣ್ಣದಾದ ಅಂಡಗಳನ್ನು ಉತ್ಪಾದಿಸುವುದಲ್ಲದೆ, ಗರ್ಭಾಂಕುರಗೊಳ್ಳದೆ ವೃದ್ಧಿಯಾಗಬಹುದಾಗಿದ್ದು ಗಂಡು ಜೀವಿಗಳಿಗೆ ಜನ್ಮ ಕೊಡಬಹುದು. ಗರ್ಭಾಂಕುರಗೊಂಡರೆ ಹೆಣ್ಣು ಜೀವಿಗಳಿಗೆ ಜನ್ಮ ಕೊಡಬಹುದು.

	ಕೆಲವು ಮಾದರಿ ಎಫಿಡ್‍ಗಳಲ್ಲಿ ಪಿತೃರಹಿತವಾಗಿ ಜನಿಸುವ ಹಲವಾರು ಪೀಳಿಗೆಗಳು ಗರ್ಭಾಂಕುರಗೊಂಡ ಅಂಡಗಳ ಮಾರ್ಗವನ್ನು ಅನುಸರಿಸಿ, ವಸಂತಕಾಲದಲ್ಲಿ ಅಂಡಗಳು ಒಡೆಯಬಹುದು. ವಸಂತ ಹಾಗೂ ಬೇಸಗೆಯ ಕಾಲದಲ್ಲಿ ರೆಕ್ಕೆಗಳನ್ನು ಪಡೆಯದ ಹಾಗೂ  ಪಡೆದಿರುವಂಥ ಹೆಣ್ಣುಗಳು ಅಥವಾ ಎರಡು ಬಗೆಯವೂ ಉತ್ಪತ್ತಿಯಾಗಬಹುದು. ಮಾಗಿ ಕಾಲ ಹತ್ತಿರ ಬರುತ್ತಿದ್ದಂತೆ ಲೈಂಗಿಕ ಜೀವಿಗಳು ಗಂಡು ಹಾಗೂ ಅಂಡಗಳನ್ನು ಈಯುವಂಥ ಹೆಣ್ಣುಗಳು-ಕಾಣಿಸಿಕೊಳ್ಳುವುದು. ನಂತರ ಗಂಡು ಹೆಣ್ಣುಗಳು ಕೂಡುತ್ತವೆ. ಗರ್ಭಾಂಕುರಗೊಂಡ ಅಂಡ ವಸಂತದಲ್ಲಿ ಒಡೆದು ಹೊಸ ಜೀವಿಗಳಗೆ ಜನ್ಮವೀಯುತ್ತವೆ. ಈ ರೀತಿಯ ಪ್ರಜನನ ಚಕ್ರ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ.

ನೀರಿನ ಚಿಗಟಗಳ ಪ್ರಜನನ ಚಕ್ರ ಒಂದು ದೃಷ್ಟಿಯಲ್ಲಿ ಹೆಣ್ಣು ಬದಲಾಗುವಂಥದು. ಕೆಲವು ಜೀವ ಪ್ರಭೇಧಗಳಲ್ಲಿ ಯಾವುದೇ ಮಾತೃರಹಿತ ಪ್ರಜನನದ ರೀತಿಯಲ್ಲಿ ಹೆಣ್ಣು ಅಥವಾ ಗಂಡು ಸಂತಾನವನ್ನು ಕೊಡಬಹುದು. ಅಥವಾ ನಿಷೇಚನಕ್ಕೆ ಒಳಗಾಗಬೇಕಾದ ಅಂಡಗಳು, ಕ್ರಿಯೆಯ ಅನಂತರ ಹೆಣ್ಣು ಜೀವಿಗಳಿಗೆ ಜನ್ಮವೀಯಬಹುದು.

ಕ್ರೋಮೋಸೋಮುಗಳ ಸಂಖ್ಯೆ: ಪಿತೃರಹಿತ ಪ್ರಜನನಕ್ಕೂ ಸಹಜ ಪ್ರಜನನಕ್ಕೂ ಇರುವ ಪ್ರಮುಖ ವ್ಯತ್ಯಾಸ ವೃದ್ಧಿಹೊಂದುತ್ತಿರುವ ಅಂಡದಲ್ಲಿರುವ ಕ್ರೋಮೋಸೋಮಿನ ಸಂಖ್ಯೆಗೆ ಸಂಬಂಧಿಸಿದೆ. ಉಚ್ಚರೀತಿಯ ಅನೇಕ ಪ್ರಾಣಿಗಳಲ್ಲಿ ದೈಹಿಕ ಜೀವಕೋಶಗಳಲ್ಲಿ ಕ್ರೋಮೋಸೋಮುಗಳ ಸಂಖ್ಯೆ ದ್ವಿಗುಣಿತ (ಡಿಪ್ಲಾಯಿಡ್) ರೀತಿಯದ್ದಾಗಿರುತ್ತದೆ. ಸಂತಾನೋತ್ಪಾದಕ ಜೀವಕೋಶಗಳ ಪೈಕಿ ಒಂದರಲ್ಲಿ ಎರಡು ವಿಭಜನೆಗಳಾಗಿ, ಅವುಗಳಲ್ಲಿ ಸಮಜಾತ ಕ್ರೋಮೋಸೋಮುಗಳು ಬೇರ್ಪಡುತ್ತವೆ. ಈ ಬಗೆಯ ನ್ಯೂನೀಕರಣ ವಿಭಜನ ಕ್ರಿಯೆಯ (ಮಿಯಾಸಿಸ್) ಕಾರಣದಿಂದ ಪ್ರಬುದ್ಧ ಲೈಂಗಿಕ ಕೋಶಗಳಲ್ಲಿ ದೈಹಿಕ ಕೋಶದ ಅರ್ಧ ಭಾಗದಷ್ಟು ಸಂಖ್ಯೆಯಲ್ಲಿ ಕ್ರೋಮೋಸೋಮುಗಳಿರುವುವು. ಕೆಲವು ಏಕ ಗುಣಿತ (ಹ್ಯಾಪ್ಲಾಯಿಡ್) ಅಂಡಗಳು ಪಿತೃರಹಿತ ರೀತಿಯಲ್ಲಿ ವೃದ್ಧಿ ಹೊಂದಬಹುದು. ಸಾಮಾನ್ಯವಾಗಿ ಒಮ್ಮೊಮ್ಮೆ ಪಿತೃರಹಿತ ಜನಿತ ಅಂಡಗಳು ಎರಡು ವಿಭಜನೆಗಳಲ್ಲಿ ನ್ಯೂನೀಕರಣ ಆಗದೇ ಬಿಟ್ಟುಬಿಡುವ ಕ್ರೋಮೋಸೋಮುಗಳ ಸಂಖ್ಯೆ ದ್ವಿಗುಣಿತ ಸ್ಥಿತಿಯಲ್ಲೇ ಇರಬಹುದು. ಜೇನುನೊಣದಲ್ಲಿ ಗರ್ಭಾಂಕುರಗೊಂಡ ಅಂಡಗಳು ದ್ವಿಗುಣಿತವಾಗಿರುವುವಲ್ಲದೆ ಅವುಗಳಿಂದ ಹುಟ್ಟುವಂಥ ಹೆಣ್ಣು ನೊಣಗಳೂ ದ್ವಿಗೂಣಿತ ಕ್ರೋಮೋಸೋಮಿನ ಸಂಖ್ಯೆಯನ್ನೇ ಪಡೆದಿರುತ್ತವೆ. ಆದರೆ, ಪ್ರಬುದ್ಧ ಗರ್ಭಾಂಕುರಗೊಳ್ಳುವಂಥ ಅಂಡಗಳು ಏಕಗುಣಿತವಾಗಿರುತ್ತವೆ. ಈ ಏಕಗುಣಿತ ಅಂಡಗಳು ಗರ್ಭಾಂಕುರಗೊಳ್ಳದೆಯೇ ಇದ್ದಲ್ಲಿ ಪಿತೃರಹಿತ ಜನನದ ರೀತಿಯಲ್ಲಿ ವೃದ್ಧಿ ಹೊಂದುವುದರ ಮೂಲಕ, ಏಕಗುಣಿತ ಕ್ರೋಮೋಸೋಮ್ ಸಂಖ್ಯೆಯನ್ನುಳ್ಳ ಗಂಡು ನೊಣಗಳಿಗೆ ಜನ್ಮವೀಯುವುವು. ಇಂಥ ಗಂಡು ನೊಣಗಳ ರೇತ್ರಾಣುಗಳಲ್ಲಿ ಏಕಗುಣಿತ ಕ್ರೋಮೋಸೋಮ್ ಸಂಖ್ಯೆಯೇ ಇರುವುದರಿಂದ ಲೈಂಗಿಕ ಕೋಶಗಳಲ್ಲಿ ಕ್ರೋಮೋಸೋಮುಗಳ ಯಾವುದೇ ಬಗೆಯ ನ್ಯೂನೀಕರಣ ಇರುವುದಿಲ್ಲ. ಈ ಗಂಡುಕೋಶಗಳು ಗ್ಯಾಮೀಟ್ ಮತ್ತು ಅಂಡಗಳಂತೆಯೇ ಏಕಗುಣಿತ ರೀತಿಯವಾಗಿರುತ್ತವೆ. 
ಎಫಿಡ್‍ಗಳಲ್ಲಿ ಪಿತೃರಹಿತ ಜನಿತ ಹೆಣ್ಣು ಲೈಂಗಿಕ ಹೆಣ್ಣುಗಳೆರಡೂ ದ್ವಿಗುಣಿತ ಸಂಖ್ಯೆಯ ಕ್ರೋಮೋಸೋಮುಗಳನ್ನು ಪಡೆದಿವೆ. ಹೆಣ್ಣಿನ ಅಂಡಗಳಲ್ಲಿ ಎರಡು ರೀತಿಯ ವಿಭಜನೆಯಿಂದ ಕಾಣಬಹುದು, ಏಕಗುಣಿತ ಸ್ಥಿತಿ ಮತ್ತು ಅಂಡಗಳು ಆದರೆ ಪಿತೃರಹಿತ ಅಂಡಗಳು ದ್ವಿಗುಣಿತ ಸಂಖ್ಯೆಯ ಕ್ರೋಮೋಸೋಮುಗಳನ್ನು ಪಡೆದಿರುವುವು. ಈ ಅಂಡಗಳು ದ್ವಿಗುಣಿತ ಕ್ರೋಮೋಸೋಮು ಸಂಖ್ಯೆಯುಳ್ಳ ಹೆಣ್ಣು ಜೀವಿಗಳಿಗೆ ಜನ್ಮವೀಯುವುವು. ಗಂಡು ಜೀವಿಗಳಾಗಿ ವೃದ್ಧಿ ಹೊಂದುವಂಥ ಪಿತೃಸಹಿತ ಜನಿತ ಅಂಡಗಳು ವಿಭಜನೆಯ ಸಮಯದಲ್ಲಿ ಒಂದು ಸಂಪೂರ್ಣ ಕ್ರೋಮೋಸೋಮನ್ನು ಬಿಟ್ಟು ಬಿಡುವುದರ ಕಾರಣ, ಗಂಡು ಜೀವಿಗಳ ದ್ವಿಗುಣಿತ ಕ್ರೋಮೋಸೋಮಿನ ಸಂಖ್ಯೆಯಲ್ಲಿ ಒಂದು ಕ್ರೋಮೋಸೋಮು ಕಡಿಮೆ ಇರುತ್ತದೆ. ಗಂಡು ಲೈಂಗಿಕ ಕೋಶದಲ್ಲಿ ಅಸಮ ವಿಭಜನೆ ನಡೆದು ಒಂದೂ ಕೋಶ ಸಂಪೂರ್ಣ ಏಕಗುಣಿತ ಕ್ರೋಮೋಸೋಮಿನ ಗುಂಪನ್ನು ಪಡೆದು, ಮತ್ತೊಂದು ಕೋಶ ಒಂದು ಕ್ರೋಮೋಸೋಮನ್ನು ಕಡಿಮೆ ಪಡೆಯುತ್ತದೆ. ಮೊದಲು ಹೇಳಿರುವಂತೆ ಜೀವಕೋಶ ರೇತ್ರಾಣುವನ್ನು ಉತ್ಪಾದಿಸುವುದರ ಕಾರಣ ಗಂಡು ಲೈಂಗಿಕ ಕೋಶ ಏಕಗುಣಿತ ಸಂಖ್ಯೆಯನ್ನು ಪಡೆದಿರುತ್ತದೆ. 

ನೀರಿನ ಚಿಗಟಗಳಲ್ಲಿ ಹೆಣ್ಣು ಮತ್ತು ಗಂಡುಗಳು ದ್ವಿಗುಣಿತ ಕ್ರೋಮೋಸೋಮ್ ಸಂಖ್ಯೆಯವಾಗಿರುವುವು. ಪಿತೃ ರಹಿತ ಜನಿತ ಅಂಡಗಳು ಒಂದು ಬಾರಿಯ ವಿಭಜನೆಯಿಂದ ಪ್ರಬುದ್ಧ ಸ್ಥಿತಿಗೆ ಬಂದು ದ್ವಿಗುಣಿತವಾಗಿರುತ್ತವೆ. ಲೈಂಗಿಕ ಅಂಡಗಳು ರೇತ್ರಾಣುಗಳು ಎರಡು ಬಾರಿ ವಿಭಜನೆಯಿಂದ ಉತ್ಪತ್ತಿಯಾಗುವುವು. ಅವು ಏಕಗುಣಿತವಾದ ಕ್ರೋಮೋಸೋಮು ಸಂಖ್ಯೆಯನ್ನು ಪಡೆದಿರುತ್ತವೆ.
ದ್ವಿಗುಣಿತ ಕ್ರೋಮೋಸೋಮ್ ಸಂಖ್ಯೆಯನ್ನು ಮರಳಿ ಪಡೆಯುವುದು; ನ್ಯೂನೀಕರಣ ವಿಭಜನೆಯ ಅನಂತರವೂ ವಾಹಿಗಳಲ್ಲಿ ಸಾಧಾರಣವಾದ ಅಥವಾ ದ್ವಿಗುಣಿತ ಕ್ರೋಮೋಸೋಮಿನ ಸಂಖ್ಯೆ ಪಿತೃರಹಿತ ಜನಿತ ಸಂತಾನದಲ್ಲಿ ಉಳಿಯುವಂತಿದ್ದು, ನ್ಯೂನೀಕರಣ ವಿಭಜನ ಕ್ರಿಯೆಯ ಕೊನೆಯಲ್ಲಿ ಕ್ರೋಮೋಸೋಮುಗಳು ದ್ವಿಪ್ರತಿಗೊಳ್ಳುತ್ತವೆ.

ತಳೀಕರಣ ಹಾಗೂ ವಿಕಾಸದ ಸಂಬಂಧ; ಒಮ್ಮೊಮ್ಮೆ ಕೆಲವು ಪ್ರಭೇದಗಳಲ್ಲಿ ಅಡ್ಡಹಾಯ್ಕೆಯುಂಟಾಗಿ ಪಿತೃರಹಿತ ಪ್ರಜನನದ ರೀತಿಯ ವೃದ್ಧಿ ಕಂಡುಬರುತ್ತದೆ. ಇಂಥ ಮಿಶ್ರ ತಳಿ ಪ್ರಭೇದಗಳಲ್ಲಿರುವ ಕ್ರೋಮೋಸೋಮುಗಳು ಸಮಜಾತವಾಗಿರುವುದಿಲ್ಲ. ಈ ರೀತಿಯಲ್ಲಿ ಅಸಮತೆ ಪ್ರಬುದ್ಧ ಸ್ಥಿತಿಯನ್ನು ಕೂಡಿಕೊಳ್ಳದಿರುವುದನ್ನು ಸೂಚಿಸುವುದಲ್ಲದೆ, ಸಾಮಾನ್ಯವಾಗಿ ಪಿತೃರಹಿತ ಪ್ರಜನನಕ್ಕೆ ದಾರಿ ಮಾಡುತ್ತದೆ ಎಂದು ಹೇಳಲಾಗುವುದಿಲ್ಲ. ದ್ವಿಗುಣಿತ ಕ್ರೋಮೋಸೋಮುಳ್ಳ ಪಿತೃರಹಿತ ಜನಿತ ಸಂತಾನ ಸ್ಪಷ್ಟವಾಗಿ ಇಂಥ ಒಂದು ನ್ಯೂನತೆಯನ್ನು ಸರಿಪಡಿಸಲು ಅನುವಾಗುತ್ತದೆ. ಪಿತೃರಹಿತ ಪ್ರಜನನದ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುವಂಥ ಜೀವಿಗಳಲ್ಲಿ ವಿಕಾಸ ನಿರ್ಬಂಧಗೊಂಡಿರುತ್ತದೆ. ಪಿತೃರಹಿತ ಪ್ರಜನನದ ಹಾದಿಯಲ್ಲಿ ಆಯ್ಕೆಯ ಅಸಾಮಥ್ರ್ಯತೆ ಬದಲಾವಣೆ ಬಹಳ ಅಪರೂಪವೆಂದು ಇದು ತೋರಿಸುತ್ತದೆ. ಒಂದು ವೇಳೆ ಅಡ್ಡಹಾಯಿಕೆ ಕಂಡುಬಂದು ಗುಣಗಳ ಮರುಸಂಯೋಗತೆ ಸಾಧ್ಯವಾದಲ್ಲಿ ವಿಕಾಸ ಕ್ರಿಯೆ ನಿಧಾನವಾಗಿ ನಡೆಯುತ್ತದೆ. ಪಿತೃರಹಿತ ಜನಿತ ಅಥವಾ ಲೈಂಗಿಕ ರೀತಿಯ ಸಂತಾನೋತ್ಪತ್ತಿ ಪರ್ಯಾಯವಾಗಿ ನಡೆಯುವಂಥ ಪ್ರಭೇದದಲ್ಲಿ ಪಿತೃರಹಿತ ಸಂತಾನ ವಿಕಾಸದ ದೃಷ್ಟಿಯಿಂದ ಗಮನಾರ್ಹವಾಗಬಹುದು. 

ಕೃತಕ ಪಿತೃರಹಿತ ಪ್ರಜನನ; ಸಾಗರದಲ್ಲಿ ಜೀವಿಸುವ ಅಕಶೇರುಕ ಪ್ರಾಣಿಗಳನ್ನು, ಮುಖ್ಯವಾಗಿ ಕಂಟಕಚರ್ಮಿ, ಮೃದ್ವಂಗಿ ಹಾಗೂ ಕೃತಕ ಪಿತೃರಹಿತ ಜನನ ಪ್ರಯೋಗಗಳಿಗೆ ಬಳಸಲಾಗಿದೆ. ಹೀಗೆ ಪ್ರಯೋಗಕ್ಕೆ ಒಳಗಾಗಿರುವ ಇವು ವಲಯವಂತಗಳನ್ನು ಅತ್ಯಧಿಕವಾಗಿ ಅಂಡಗಳನ್ನು ಉತ್ಪತ್ತಿ ಮಾಡಿದಾಗ, ಅವನ್ನು ನೇರವಾಗಿ ಸಾಗರದ ನೀರಿನಲ್ಲಿ ಹಾಕಿ ಅವುಗಳ ಪ್ರಾಥಮಿಕ ಹಂತಗಳನ್ನು ಅಭ್ಯಸಿಸಲಾಗಿದೆ. ಹಾಗೆಯೇ ಮೀನು, ಕಪ್ಪೆಯ ಹಾಗೂ ಸ್ತನಿಗಳ ಅಂಡಗಳನ್ನು ಬೆಳೆಸಲು ಪ್ರಯತ್ನಿಸಲಾಗಿದೆ. ಪ್ರಯೋಗಗಳಲ್ಲಿ ಕೆಲವು ವಿಧದ ಪ್ರೇರಕ ವಸ್ತುಗಳು ಹೆಚ್ಚು ಫಲ ಕೊಟ್ಟಿವೆ ಎನ್ನುವುದು ಒಂದು ಕುತೂಹಲಕಾರಿಯಾದ ವಿಷಯವೇ ಸರಿ. ಒಂದೇ ಪ್ರಭೇದದಲ್ಲಿಯ ಅಂಡಗಳು ಯಾವುದಾದರೊಂದು ಬಗೆಯ ಪ್ರೇರಕ ವಸ್ತುವಿನಿಂದ ಚೋದನೆಗೊಳ್ಳಬಹುದು. ಹೀಗೆ ಕಡಲ ಕುಡಿಕೆಯಲ್ಲಿ ಪ್ರೇರಣೆ ಫಲಕಾರಿಯಾಗಬೇಕಾದರೆ, ಅಧಿಕ ಆಮ್ಲತೆ ಹಾಗೂ ಅಧಿಕ ಕ್ಷಾರತೆ, ಲವಣದ ನ್ಯೂಟ್ರಲ್ ದ್ರಾವಣ. ಅತಿಪರಾಸರಿ ಅಥವಾ ಮಿತಪರಾಸರಿ ಸಮುದ್ರದ ನೀರು ಇವುಗಳ ಆಶ್ರಯಕ್ಕೆ ಅಂಡಗಳು ಬರುವಂತೆ ಮಾಡಿ, ಕೆಲವು ಬಗೆಯ ಕ್ಷಾರ ವಸ್ತುಗಳು, ಕೊಬ್ಬು ಮಿಶ್ರಿತ ದ್ರಾವಣ ಸೂಕ್ಷ್ಮವಾದ ಸೂಜಿಮೊನೆಯಿಂದ ಚುಚ್ಚುವುದು, ಉಷ್ಣತೆ, ಶೀತ, ಅತಿನೇರಿಳೆ ವಿಕರಣ ಹಾಗೂ ರೇಡಿಯಮ್ ವಿಕರಣಕ್ಕೆ ಅಂಡಗಳನ್ನು ಒಳಗಾಗಿಸಬಹುದು. ಈ ಎಲ್ಲ ಬಗೆಯ ಪ್ರೇರಕಗಳು ಸಮಾನವಾದ ಪ್ರಭಾವವನ್ನು ಬೀರದಿದ್ದರೂ, ಕೆಲವು ಪ್ರೇರಕಗಳು ಒಂದೇ ಬಗೆಯ ಫಲಿತಾಂಶವನ್ನು ಕೊಟ್ಟಿವೆ. ವ್ಯತ್ಯಾಸವೇನಾದರು ಕಂಡುಬಂದಲ್ಲಿ ಅದು ಒಂದು ಪ್ರೇರಕ ವಸ್ತುವಿನೊಂದಿಗೆ ಅಂಡಗಳನ್ನು ಒಳಗಾಗಿಸುವಾಗ ಆಗಬಹುದಾದ ಪ್ರತಿಕ್ರಿಯೆಗೆ ಸಂಬಂಧಿಸಿರಬಹುದು. 

ಕಡಲು ಕುಡಿಕೆಯ ಅಂಡಗಳಿಗೆ ಸಂಬಂಧಿಸಿದ ಲೋಬ್ಸನ ಮೂಲ ಪ್ರಯೋಗದಲ್ಲಿ ಅಂಡಗಳನ್ನು ಅತಿಪರಾಸರ ದ್ರಾವಣಕ್ಕೆ ಒಳಪಡಿಸಲಾಗಿತ್ತು. ಕಾಲಕ್ರಮದಲ್ಲಿ ಆತ ಎರಡು ತೆರನ ಪ್ರೇರಕ ಕ್ರಿಯೆಯನ್ನು ಕಂಡುಹಿಡಿದನಲ್ಲದೆ ಈ ವಿಧಾನದಿಂದ ಸಾಧಾರಣವಾದ ರೀತಿಯಲ್ಲಿ ವೃದ್ಧಿ ಹೊಂದುವಂಥ ಸಾಧ್ಯತೆ ಹೆಚ್ಚುವಂತೆ ಆತ ಮಾಡಿದ. 
ಪ್ರಬುದ್ಧ ಪ್ರಾಣಿಗಳು ಮತ್ತು ಸಾಧಾರಣ ಬಗೆಯ ಭ್ರೂಣದ ಉತ್ಪಾದನೆ; ಸರಿಯಾದ ರೀತಿಯ ಕೃತಕ ಪ್ರೇರಣೆಯಿಂದ ವೃದ್ಧಿ ಹೊಂದುವಂತ ಅಂಡಗಳು ಗಾತ್ರದಲ್ಲಿ ಸಾಧಾರಣ ಗರ್ಭಾಂಕುರತೆಯಿಂದ ಪಡೆಯುವ ಅಂಡಗಳಷ್ಟೆ ಇರುತ್ತವೆ. ಸಾಮಾನ್ಯವಾಗಿ ಅಂಡಗಳನ್ನು ಡಿಂಬ ಸ್ಥಿತಿಯವರೆಗೆ ಮಾತ್ರ ಬೆಳೆಸಿದರೂ ಹಲವಾರು ಬಗೆಯ ಕಡಲುಕುಡಿಕೆ ಹಾಗೂ ನಕ್ಷತ್ರ ಮೀನುಗಳನ್ನು ಪ್ರಬುದ್ಧ ಸ್ಥಿತಿಯವರೆಗೂ ವೃದ್ಧಿಸಲಾಗಿದೆ. ಸುವ್ಯವಸ್ಥಿತವಾಗಿ ಸರಿಯಾದ ಡಿಂಬಗಳನ್ನು ಉತ್ಪತ್ತಿ ಮಾಡಲು ಸಾಧ್ಯವಿದೆ ಎಂದಾಗ ಪ್ರಬುದ್ಧ ಸ್ಥಿತಿಯ ಜೀವಿಗಳನ್ನು ಸೂಕ್ಷ್ಮವಾದ ಬೆಳವಣಿಗೆ ವಿಧಾನದಿಂದ ಪಡೆಯಬಹುದು. 

ಕ್ರೋಮೋಸೋಮುಗಳ ಸಂಖ್ಯೆ ; ಅಂಡದಲ್ಲಿರುವ ಕೋಶಕೇಂದ್ರದ ನ್ಯೂನೀಕರಣ ವಿಭಜನೆಯ ತರುವಾಯ ಕ್ರೋಮೋಸೋಮುಗಳ ಸಂಖ್ಯೆ ಏಕಗುಣಿತವಾಗುತ್ತದೆ. ರೇತ್ರಾಣುವಿನ ಕೋಶಕೇಂದ್ರದಲ್ಲಿಯೂ ಇದೇ ರೀತಿಯ ಬದಲಾವಣೆ ಕಂಡುಬರುತ್ತದೆ. ಅಂಡದ ಕೋಶಕೇಂದ್ರದ ಹಾಗೂ ರೇತ್ರಾಣುವಿನ ಕೋಶಕೇಂದ್ರದ ಕುಡಿಕೆಯಿಂದಾಗುವ ಸಾಧಾರಣ ರೀತಿಯ ಗರ್ಭಾಂಕುರತೆಯ ತರುವಾಯ ಕ್ರೋಮೋಸೋಮ್ ಸಂಖ್ಯೆ ದ್ವಿಗುಣಿತಗೊಳ್ಳುತ್ತದೆ. ಕೃತಕವಾದ ಪಿತೃರಹಿತ ಸಂತಾನದಲ್ಲಿ ಏಕಗುಣಿತ ಜೀವಿಗಳಾಗಿ ವೃದ್ಧಿಸುವುದೆಂದು ಭಾವಿಸಬಹುದು. ಆದರೆ ಕೋಶಶಾಸ್ತ್ರದ ಸಂಶೋಧನೆಗಳು ದ್ವಿಗುಣಿತ ಭ್ರೂಣಗಳು ಕಾಣಿಸಿಕೊಳ್ಳಬಹುದು ಎಂಬ ಅಂಶವನ್ನು ತೋರಿಸಿವೆ. ಅದರಲ್ಲಿಯೂ ಪ್ರಬುದ್ಧ ಸ್ಥಿತಿಗೆ ಬರುವ ಹಂತದಲ್ಲಿರುವ ಜೀವಿಗಳಾದರೋ ಸಾಮಾನ್ಯವಾಗಿ ಭ್ರೂಣಾವಸ್ಥೆಯಲ್ಲೇ ಸಾಯುತ್ತವೆ.

ಲಿಂಗಭೇದ: ಕೃತಕ ಪ್ರೇರಣೆಯ ಸಹಾಯದಿಂದ ಪಡೆದಂಥ ಜೀವಿಗಳ ಕ್ರೋಮೋಸೋಮುಗಳ ನಡತೆಯನ್ನು ಅನುಸರಿಸುತ್ತದೆ. ಗಂಡುತನ ಅಥವಾ ಹೆಣ್ಣುತನ ಲೈಂಗಿಕ ಕ್ರೋಮೋಸೋಮುಗಳ ಹಾಗೂ ಆಟೋಸೋಮುಗಳ ಗುಂಪಿನ ಪ್ರಮಾಣವನ್ನು ಅನುಸರಿಸಿ ನಿರ್ಧಾರಗೊಳ್ಳುತ್ತದೆ.
(ಎಂ.ಆರ್.ಆರ್.ಎಸ್.) (ನಾ. ಸೋಮೆಶ್ವರ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ